ಶ್ರವಣಬೆಳಗೊಳ, ನವೆಂಬರ್ 4, 2017: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಭಗವನ್ ಬಾಹುಬಲಿ ಸ್ವಾಮಿಗೆ ನಡೆಯಲಿರುವ ಮಹಾ ಮಸ್ತಕಾಭಿಷೇಕದ ಸಿದ್ದತೆ ಪರಿಶೀಲಿಸಿದರು.
ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈನ ಮಠದ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರನ್ನು ಭೇಟಿಯಾದರು.
ಶ್ರವಣಬೆಳಗೊಳದಲ್ಲಿ ಮುಖ್ಯಮಂತ್ರಿಯವರ ಹೇಳಿಕೆ: ಅಮಿತ್ ಶಾ ಅವರದ್ದು ಹಿಟ್ ಅಂಡ್ ರನ್ ಕೇಸು. ಕೇಂದ್ರ ಸರ್ಕಾರ ನೀಡುವ ಅನುದಾನದ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವುದು ಅನುದಾನ ಅಲ್ಲ, ಅದು ನಮ್ಮ ಪಾಲು.
ಕೇಂದ್ರದಿಂದ ಎರಡು ರೂಪದಲ್ಲಿ ಹಣ ಬರುತ್ತದೆ. ಒಂದು ಅನುದಾನ, ಮತ್ತೊಂದು ತೆರಿಗೆಯಲ್ಲಿ ಪಾಲು ಕೊಡುವುದು. ಕೇಂದ್ರ ಸರ್ಕಾರ ರಾಜ್ಯಗಳಿಂದ ವಿವಿಧ ರೂಪಗಳಲ್ಲಿ ತೆರಿಗೆ ಸಂಗ್ರಹ ಮಾಡುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳ ಪಾಲು ಎಷ್ಟು ಎಂಬುದನ್ನು ಐದು ವರ್ಷಗಳಿಗೆ ಒಮ್ಮೆ ರಚನೆಯಾಗುವ ಹಣ ಕಾಸು ಆಯೋಗ ನಿರ್ಧಾರ ಮಾಡುತ್ತದೆ.
14ನೇ ಹಣ ಕಾಸು ಆಯೋಗದ ಶಿಫಾರಸ್ಸು ಪ್ರಕಾರ ಕಳೆದ ಐದು ವರ್ಷದಲ್ಲಿ ರಾಜ್ಯಕ್ಕೆ 1.86 ಲಕ್ಷ ಕೋಟಿಯಷ್ಟು ಕೇಂದ್ರ ಕೊಡಬೇಕಿತ್ತು. 3 ವರ್ಷದಲ್ಲಿ 96 ಸಾವಿರ ಕೋಟಿ ರೂ. ರಾಜ್ಯಕ್ಕೆ ಸಿಗಬೇಕಿತ್ತು ಅದರಲ್ಲಿ 11 ಸಾವಿರ ಕೋಟಿ ಕಡಿಮೆ ಆಗಿದೆ. ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇಕಾಡ 42 ರಷ್ಟನ್ನು ರಾಜ್ಯಕ್ಕೆ ಕೊಡಬೇಕೆಂದು ಹಣ ಕಾಸು ಆಯೋಗ ಶಿಫಾರಸ್ಸು ಮಾಡಿದೆ.
ಮಾರಾಟ ತೆರಿಗೆ, ಅಬಕಾರಿ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಮಾತ್ರ ರಾಜ್ಯ ಸರ್ಕಾರ ಸಂಗ್ರಹಿಸುತ್ತದೆ. ಉಳಿದದ್ದನ್ನು ಕೇಂದ್ರ ಸರ್ಕಾರವೇ ಸಂಗ್ರಹಿಸಿ ತನ್ನ ಬಳಿ ಇಟ್ಟುಕೊಳ್ಳುತ್ತದೆ. ಈ ವಿಚಾರ ತಿಳಿಯದೆ ಅಮಿತ್ ಶಾ ಅವರು ಧರ್ಮಕ್ಕೆ ಕೊಟ್ಟವರ ರೀತಿ ಮಾತನಾಡುತ್ತಾರೆ ಕೇಂದ್ರ ಸರ್ಕಾರ ಕೊಟ್ಟಿರುವ ಹಣದಲ್ಲಿ ಯಾವುದಕ್ಕೆ ನಾವು ಖರ್ಚು ಮಾಡಿಲ್ಲ ಎಂಬುದನ್ನು ಅಮಿತ್ ಶಾ ಅವರು ಸ್ಪಷ್ಟವಾಗಿ ಹೇಳಬೇಕು.
ಕೇಂದ್ರ ಸರ್ಕಾರ ನಮಗೆ ಮಾತ್ರವಲ್ಲ ಎಲ್ಲಾ ರಾಜ್ಯಗಳಿಗೂ ಅನುದಾನ ನೀಡುತ್ತದೆ. ಹತ್ತು ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಹಣದಲ್ಲಿ 1.86 ಲಕ್ಷ ಕೋಟಿ ನಮ್ಮ ಪಾಲು. ಅಂದರೆ ಶೇಕಾಡ 4.7 ಇದನ್ನು ತಿಳಿದುಕೊಂಡು ಅಮಿತ್ ಶಾ ಮಾತನಾಡಬೇಕು ಎಂದರು.
ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಮುಂದಿನ ಜನವರಿ 10 ರವರೆಗೆ ಗಡುವು ನೀಡಿದ್ದಾರೆ.
ಜನವರಿ 10ರ ವೇಳೆಗೆ ಮಹಾಮಸ್ತಕಾಭಿಷೇಕ ಶ್ರವಣಬೆಳಗೊಳ ಸಕಲ ರೀತಿಯಲ್ಲಿ ಸಜ್ಜಾಗಿರಬೇಕು ಎಂದು ಸಿಎಂ ಆದೇಶಿಸಿದ್ದಾರೆ. ಜನವರಿ 10ರ ಬಳಿಕ ಮತ್ತೆ ಶ್ರವಣಬೆಳಗೊಳಕ್ಕೆ ಭೇಟಿ ನೀಡುತ್ತೆನೆ ಅಷ್ಟರಲ್ಲಿ ಎಲ್ಲಾ ಕೆಲಸಗಳು ಪೂರ್ಣಗೊಂಡಿರಬೇಕು ಎಂದು ಹೇಳಿದ್ದಾರೆ.
ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದ ಮುಖ್ಯಮಂತ್ರಿಯವರು ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಿದರು.
ಈ ಮಧ್ಯೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿ ಅವರನ್ನೂ ಸಿಎಂ ಭೇಟಿ ಮಾಡಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಎಲ್ಲಾ ಕಾಮಗಾರಿಗಳು ಭರದಿಂದ ಸಾಗಿದೆ ಎಂದು ಹೇಳಿದರು.
2018ರ ಫೆಬ್ರವರಿ 7 ರಂದು ರಾಷ್ಟ್ರಪತಿಯವರು ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಿದ್ದಾರೆ. ಫೆ.26ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 175 ಕೋಟಿ ರೂ.ಗಳ ಅನುದಾನ ಒದಗಿಸಿದೆ. ಹಣಕಾಸು ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಈವರೆಗೆ ಸ್ಪಂದಿಸಿಲ್ಲ. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಕೇಂದ್ರ ಸರ್ಕಾರ ನೆರವು ನೀಡುವ ನಂಬಿಕೆ ಇಲ್ಲ ಹಾಗೆಂದು ನಾವು ಕೈಕಟ್ಟಿ ಕೂರುವುದಿಲ್ಲ ಕಾರ್ಯಕ್ರಮದ ವಿಷಯದಲ್ಲಿ ಕೇಂದ್ರದ ಜವಾಬ್ದಾರಿಯೂ ಇದೆ. ಪ್ರಾಕೃತ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸರ್ಕಾರ 21 ಕೋಟಿ ರೂ.ಗಳನ್ನು ಒದಗಿಸಿದೆ. ಆ ಹಣದಲ್ಲಿ ಗ್ರಂಥಾಲಯ, ವಿದ್ಯಾರ್ಥಿ ನಿಲಯ ಹಾಗೂ ಬೋಧಾನ ಕಟ್ಟಡ ನಿರ್ಮಿಸಲಾಗುವುದು, ಕಾಮಗಾರಿಗಳು ಈಗಾಗಲೇ ಟೆಂಡರ್ ಕರೆದಿದೆ.
ಮಹಾಮಸ್ತಕಾಭಿಷೇಕದಲ್ಲಿ 40 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 27-28 ಸಾವಿರ ಮಂದಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ 12 ಉಪ ನಗರಗಳ ನಿರ್ಮಾಣ ಕಾಮಗಾರಿ ಕೈಗೊಂಡಿದೆ.
ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸಲಿದ್ದಾರೆ. ವಸ್ತು ಪ್ರದರ್ಶನ, ಜಲಕ್ರೀಡೆ, ಹೆಲಿ ಟೂರಿಸಂಗೂ ಆದ್ಯತೆ ನೀಡಲಾಗಿದೆ. ಮಹಾಮಸ್ತಕಾಭಿಷೇಕದ ನೆನಪಿಗಾಗಿ ಹಾಸನ ನಗರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ.
ಯಾತ್ರಿಗಳ ಅನುಕೂಲಕ್ಕೆ ಶ್ರವಣಬೆಳಗೊಳದಲ್ಲಿ ಆಸ್ಪತ್ರೆ, ಆಂಬುಲೆನ್ಸ್, ಬಸ್ ನಿಲ್ದಾಣ, ಕಲ್ಯಾಣಿ ಪುನರುಜ್ಜೀವನ, ಕುಡಿಯುವ ನೀರು ಮತ್ತಿತರ ಸೌಲಭ್ಯ ಒದಗಿಸಲಾಗುತ್ತದೆ. ಮಹಾಮಸ್ತಕಾಭಿಷೇಕ ಮಾಡಲು ಅಟ್ಟಣಿಗೆ ನಿರ್ಮಿಸಲಾಗುತ್ತಿದೆ. ಕೆಲಸ ಶೇ.10ರಷ್ಟು ಪೂರ್ಣಗೊಂಡಿದೆ.
ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ 14 ರಸ್ತೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ರೈತರ 490 ಎಕರೆ ಭೂಮಿಯನ್ನು ತಾತ್ಕಾಲಿಕವಾಗಿ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿದ್ದೇವೆ.
ಈವರೆಗಿನ ಕಾಮಗಾರಿಗಳ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪ್ರವಾಸಿಗರು ಮಸ್ತಕಾಭಿಷೇಕ ವೀಕ್ಷಣೆಗೆ ಬರುತ್ತಾರೆ ಅವರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಆರೋಗ್ಯ ಸೇವೆಗಳು ಉತ್ತಮವಾಗಿರ ಬೇಕು, ಹೆಚ್ಚಿನ ವೈದ್ಯರು, ದಾದಿಯರು ಹಾಗೂ ಅಂಬುಲೆನ್ಸ್ಗಳನ್ನು ನಿಯೋಜಿಸುವಂತೆ ಅವರು ನಿರ್ದೇಶನ ನೀಡಿದರು.
ಅಗ್ನಿಶಾಮಕ ವಾಹನಗಳನ್ನು ಸುಸ್ತಿಯಲ್ಲಿಡಿ ಕುಡಿಯುವ ನೀರಿನ ಪೂರೈಕೆ ಹಾಗೂ ಗುಣಮಟ್ಟದ ಬಗ್ಗೆ ನಿಗಾವಹಿಸಿ ಎಂದು ಅವರು ಹೇಳಿದರು.
ಒಟ್ಟಾರೆ ಮಹಾಮಸ್ತಕಾಭಿಷೇಕವನ್ನು ಅತ್ಯಂತ ಜನಾಕರ್ಷಕವಾಗಿಸಲು ಮತ್ತು ಸ್ಮರಣೀಯವಾಗಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು. -Ja
in Heritage Centres News Service