ಶ್ರವಣಬೆಳಗೊಳ, ಜುಲೈ ೭, ೨೦೧೭: ಕಲಶ ಸ್ಥಾಪನಾ ಸಮಾರಂಭದ ಉದ್ಘಾಟನೆಯನ್ನು ರಾಜ್ಯಪಾಲರಾದ ವಜುಬಾಯ್ ಆರ್ ವಾಲಾ ರವರು ನೆರವೇರಿಸಿದರು. ರಾಷ್ಟ್ರಮಟ್ಟದ ದಿಗಂಬರಜೈನ ವ್ಯವಸ್ಥಾಪಕ ಸಮಿತಿ ಆಯೋಜಿಸಿದ್ದ ಈ ಸಮಾರಂಭ ಉದ್ಘಾಟಿಸಿದ ರಾಜ್ಯಪಾಲ ವಾಜುಭಾಯಿ ಅವರು, ”ತ್ಯಾಗದಿಂದ ಉಂಟಾಗುವ ಆನಂದಕ್ಕೆ ಪಾರವೇ ಇಲ್ಲ. ನನಗಾಗಿ ಏನು ಮಾಡಿಕೊಂಡೆ ಎನ್ನುವುದಕ್ಕಿಂತ ಸಮಾಜಕ್ಕೆ ಏನು ಮಾಡಿದೆ ಎಂಬುದು ಜೀವನದ ಸಾರ್ಥಕತೆಯಾಗುತ್ತದೆ. ಇಲ್ಲದಿದ್ದರೆ, ನಾವು ಸಂಪಾದನೆ ಮಾಡಿದ್ದೆಲ್ಲವೂ ಧೂಳಿಗೆ ಸಮಾನ. ನಮ್ಮ ಗಳಿಕೆಯ ಪಾಲನ್ನು ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ ಸಮರ್ಪಣೆ ಮಾಡಬೇಕು. ಹಣವಂತನಾಗುವುದಕ್ಕಿಂತ ಗುಣವಂತನಾಗಬೇಕು. ಪ್ರಧಾನಿ ಮೋದಿಯವರು ಪರ್ವ ಕಾಲಗಳಲ್ಲಿ 9 ದಿನಗಳ ಕಾಲ ಕೇವಲ ನೀರನ್ನು ಮಾತ್ರ ಸೇವಿಸಿ ವ್ರತನಿಯಮಗಳನ್ನು ಅನುಸರಿಸಿ, ಎಂದಿನಂತೆ ತಮ್ಮ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಇದು ಸಂಸ್ಕಾರವಂತರ ಮಾದರಿ” ಎಂದರು.
”ಸತ್ಯ, ಅಹಿಂಸೆ, ಆಸ್ತೇಯ, ಅಪರಿಗ್ರಹ ಹಾಗೂ ಬ್ರಹ್ಮಚರ್ಯಗಳು ನಮ್ಮ ಜೀವನದ ಅಂಗವಾಗಬೇಕು. ”ಸತ್ಯಂವದ, ಧರ್ಮಂಚರ” ಎಂಬುದು ನಮ್ಮ ಆಚರಣೆ ಆಗಬೇಕು. ಇವುಗಳನ್ನು ಹೇಳುವುದಕ್ಕಿಂತ ಅನುಸರಣೆಗೆ ತರುವುದು ಮುಖ್ಯ. ಮಕ್ಕಳಿಗೆ ತಾಯಂದಿರಿಂದಲೇ ಸಂಸ್ಕಾರ ಬರಲಿದ್ದು, ಪೂಜನೀಯವಾದ ಮಾತೃಶಕ್ತಿಯಿಂದ ಧರ್ಮದ ರಕ್ಷ ಣೆ ಆಗುತ್ತಿದೆ” ಎಂದು ಹೇಳಿದರು.
ಶ್ರೀಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ”ಬಾಹುಬಲಿಯ ತ್ಯಾಗದೊಂದಿಗೆ ರಾಜ್ಯಪಾಲ ವಾಜುಭಾಯಿ ವಾಲಾ ಅವರು ಪ್ರಧಾನಿ ಮೋದಿಗಾಗಿ ಮಾಡಿದ ತ್ಯಾಗವನ್ನು ಸಮೀಕರಿಸಿದ್ದಾರೆ. ಬಾಹುಬಲಿಯ ತಾಯಿ ಸುನಂದಾದೇವಿ ಗುಜರಾತ್ನವರು. ಧವಲಾಗ್ರಂಥಗಳು ದೊರೆತದ್ದು ಗುಜರಾತ್ನಲ್ಲಿ. ಅದು ಸಂಸ್ಕಾರಯುತ ನಾಡಾಗಿದ್ದು, ಅಲ್ಲಿಂದ ಬಂದ ರಾಜ್ಯಪಾಲರು ಸಹ ಸಂಸ್ಕಾರವಂತರಾಗಿದ್ದಾರೆ ” ಎಂದರು. ”ಮಹಾಮಸ್ತಕಾಭಿಷೇಕ ಮಹೋತ್ಸವಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 174 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರ ಯಶಸ್ಸಿಗೆ ನಿಮ್ಮ ಸಹಕಾರದ ಅಗತ್ಯವಿದೆ. ದೇಶದ ಪ್ರಧಾನಮಂತ್ರಿ ಸೇರಿದಂತೆ ಹಲವು ಗಣ್ಯ ಮಂತ್ರಿಗಳನ್ನು ಇಲ್ಲಿಗೆ ಕರೆತರಬೇಕೆಂಬುದು ನಮ್ಮ ಅಪೇಕ್ಷೆ” ಎಂದರು.
”ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಚಾತುರ್ಮಾಸ ಕಾರ್ಯಕ್ರಮ ನಡೆಯುತ್ತಿದ್ದು, 85 ಮಂದಿ ಪಿಂಛಿದಾರಿಗಳು ಒಂದೇ ವೇದಿಕೆಯಲ್ಲಿ ಚಾತುರ್ಮಾಸ ಸ್ವೀಕಾರ ಮಾಡುತ್ತಿರುವುದು ಮಹತ್ವದ ಅಂಶವಾಗಿದೆ. ಕಳೆದೆರಡು ವರ್ಷಗಳಿಂದ ರಾಜ್ಯಪಾಲರನ್ನು ಕರೆಸಬೇಕೆಂಬ ಉದ್ದೇಶವಿತ್ತು. ಅದು ಇಂದು ಈಡೇರಿದೆ. ಇಂತಹ ಸುಸಂದರ್ಭ ಶ್ರಾವಕರ ಜೀವಮಾನದಲ್ಲಿ ಅಪರೂಪವಾಗಲಿದೆ. ಇದು ದೇಶಾದ್ಯಂತ ಭಕ್ತರನ್ನು ಪುನೀತರನ್ನಾಗಿ ಮಾಡುತ್ತದೆ” ಎಂದರು.
ಆಚಾರ್ಯ ವರ್ಧಮಾನಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಗುಜರಾತ್ನ ವಕೀಲರಾದ ಆರ್.ಸಿ.ಗಾಂಧೀಜಿ ವೇದಿಕೆಯಲ್ಲಿ ರಾಜ್ಯಪಾಲರೊಂದಿಗಿದ್ದು ಗಮನ ಸೆಳೆದರು. ನಾಡೋಜ ಹಂ.ಪ.ನಾಗರಾಜಯ್ಯ ಮಾತನಾಡಿ, ಶ್ರವಣಬೆಳಗೊಳ ಕ್ಷೇತ್ರದ ಪರಿಚಯ ಹಾಗೂ ಆಚಾರ್ಯ ಪರಂಪರೆಯ ಮಹತ್ವವನ್ನು ತಿಳಿಸಿದರು.
ನಿಗದಿತ ಸಮಯದಂತೆ 11.30ಕ್ಕೆ ರಾಜ್ಯಪಾಲರು ವೇದಿಕೆಗೆ ಆಗಮಿಸಿದರಾದರೂ ಮುಗಿಯುವ ವೇಳೆಗೆ ನಿಗದಿತ ಅವಧಿಗಿಂತ 30 ನಿಮಿಷ ಹೆಚ್ಚುಕಾಲ ತೆಗೆದುಕೊಂಡಿತು. ವಿಂಧ್ಯಗಿರಿ ತಪ್ಪಲಿನಿಂದ ಶ್ರೀಮಠದವರೆಗಿನ ಎರಡೂ ಬದಿಗಳಲ್ಲಿ ರಾಜ್ಯಪಾಲರು ಬರುವ ವೇಳೆ ಕಲಶಗಳನ್ನು ಹಿಡಿದಿದ್ದ ಮಹಿಳೆಯರು ಹಾಗೂ ಧರ್ಮಧ್ವಜವನ್ನು ಹಿಡಿದಿದ್ದ ವಿದ್ಯಾರ್ಥಿಳಿದ್ದರು. ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಸಮಸ್ತ ಮುನಿಸಂಘ ಹಾಗೂ ಮಾತಾಜಿ ಸಂಘದವರು ಸಾನ್ನಿಧ್ಯ ವಹಿಸಿದ್ದರು. ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರಮಟ್ಟದ ಸಮಿತಿಯ ಅಧ್ಯಕ್ಷೆ ಸರಿತಾ ಮಹೇಂದ್ರ ಕುಮಾರ್ ಜೈನ್, ರಾಜ್ಯಸಮಿತಿ ಕಾರಾರಯಧ್ಯಕ್ಷ ಎಸ್.ಜಿತೇಂದ್ರಕುಮಾರ್, ರಾಜ್ಯಮಟ್ಟದ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಇದ್ದರು.
ಚಿತ್ರಗಳು: ಎಚ್ಎಸ್ಎನ್7ಸಿಆರ್ಪಿ1- ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಚಾತುರ್ಮಾಸ ಮಂಗಳ ಕಲಶ ಸ್ಥಾಪನೆ ಸಮಾರಂಭವನ್ನು ರಾಜ್ಯಪಾಲ ವಾಜುಭಾಯಿ ಆರ್.ವಾಲಾ ಉದ್ಘಾಟಿಸಿದರು. ಚಾರುಕೀರ್ತಿಭಟ್ಟಾರಕಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಇದ್ದರು. – ಸುದ್ದಿ ಹಾಗೂ ಚಿತ್ರಕೃಪೆ: ವಿಜಯ ಕರ್ನಾಟಕ