ಹಾಸನ, ಏಪ್ರಿಲ್ ೧೦, ೨೦೧೭: ಶ್ರವಣಬೆಳಗೊಳದಲ್ಲಿ 2018ಕ್ಕೆ ನಡೆಯಲಿರುವ ಮಹಾಮಸ್ತಕಾಭಿಷೇಕ ಯಶಸ್ವಿಗೆ ರಾಜ್ಯ ಸರಕಾರ 700ರಿಂದ 800 ಕೋಟಿ ರೂ. ನೀಡುತ್ತಿದೆ. ಡಿ.15ರ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ರೇಷ್ಮೆ , ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಮಸ್ತಕಾಭಿಷೇಕ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ”ಪಿಡಬ್ಲ್ಯೂಡಿ ಇಲಾಖೆ ರಸ್ತೆಗಳ ಅಭಿವೃದ್ಧಿಗೆ 218 ಕೋಟಿ ರೂ. ನೀಡುತ್ತಿದೆ. ಇದರೊಂದಿಗೆ ಪ್ರವಾಸೋದ್ಯಮ ಮತ್ತಿತರ ಇಲಾಖೆಗಳಿಗೂ ಅನುದಾನ ಲಭ್ಯವಾಗಲಿದೆ. ಸರಕಾರ 2016-17ನೇ ಸಾಲಿನ ಬಜೆಟ್ನಲ್ಲಿ ನೀಡಿದ ಹಣ ಮಸ್ತಕಾಭಿಷೇಕದ ಪೂರಕ ಯೋಜನೆಗಳಿಗೆ ಮಾತ್ರ ಬಳಸಬೇಕು. ಅವರು ಹೇಳಿದರು, ಇವರು ಹೇಳಿದರು ಎಂದು ಬದಲಿ ಕಾಮಗಾರಿ ಮಾಡಿದ್ದೇ ಆದಲ್ಲಿ ಅನುದಾನ ತಡೆ ಹಿಡಿಯಲಾಗುವುದು,” ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಮಸ್ತಕಾಭಿಷೇಕ ಉಸ್ತುವಾರಿಗೆ ನಿಯೋಜನೆಗೊಂಡಿರುವ ಸರಕಾರದ ಕಾರ್ಯದರ್ಶಿ ಹಾಗೂ ವಿಶೇಷ ಅಧಿಕಾರಿ ರಾಕೇಶ್ಸಿಂಗ್ ಮಾತನಾಡಿ, ”ಮಸ್ತಕಾಭಿಷೇಕದ ಕಾಮಗಾರಿಗೆ ಸರಕಾರ ಪ್ರಕಟಿಸಿರುವಂತೆ ಅನುದಾನ ಶೀಘ್ರವೇ ಬಿಡುಗಡೆಯಾಗಲಿದೆ. ಆ ಹಣವನ್ನು ಜಿಲ್ಲಾಧಿಕಾರಿ ಇಲಾಖಾವಾರು ಬಿಡುಗಡೆ ಮಾಡಲಿದ್ದು, ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಬೇಕು,” ಎಂದರು. ”ಗಣ್ಯ ಅತಿಥಿಗಳಿಗಾಗಿ ವಿಶೇಷವಾದ ಅತಿಥಿಗೃಹ ನಿರ್ಮಿಸಬೇಕಿದ್ದು, ಅದರ ನಿರ್ವಹಣೆ ಜವಾಬ್ದಾರಿಯನ್ನು ಪ್ರಾಕೃತ ವಿವಿ ಜವಾಬ್ದಾರಿಗೆ ವಹಿಸುವುದು ಸೂಕ್ತ,” ಎಂದು ಸಲಹೆ ನೀಡಿದರು.
ಗಮನಕ್ಕೆ ತನ್ನಿ: ಜಿಲ್ಲಾಧಿಕಾರಿ ವಿ.ಚೈತ್ರಾ ಮಾತನಾಡಿ, ಇಲಾಖಾವಾರು ಅಗತ್ಯ ಬೇಡಿಕೆಗಳು ಏನೇ ಇದ್ದರೂ, ಸಭೆಯ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳನ್ನು ಕೋರಿದರಲ್ಲದೆ, ಇಲಾಖಾವಾರು ಕಾಮಗಾರಿಗೆ ಕೇಂದ್ರ ಕಚೇರಿ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡು ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು. ಆಡಳಿತಾತ್ಮಕ ಅನುಮೋದನೆ ಪಡೆಯದೆ ಕಾಮಗಾರಿ ಆರಂಭಿಸಬಾರದು ಎಂದು ತಿಳಿಸಿದರು. ಭೂ ಸ್ವಾಧೀನಕ್ಕಾಗಿ 5 ಕೋಟಿ ರೂ. ನೀಡಲಾಗಿದ್ದು, 625 ಎಕರೆಯನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಬೇಕು. ಬೆಳೆಯ ಪರಿಹಾರವನ್ನು ನೀಡಬೇಕು ಎಂದರು ತಾತ್ಕಾಲಿಕ ಸ್ವಾಧೀನಕ್ಕೆ ಅಷ್ಟು ಹಣ ಸಾಕು ಅಷ್ಟರಲ್ಲೇ ಮುಗಿಸಿ ಎಂದು ಸಚಿವರು ಹೇಳಿದರು.
ಡಿಎಚ್ಒ ಡಾ.ವೆಂಕಟೇಶ್ ಮಾತನಾಡಿ, ಶ್ರವಣಬೆಳಗೊಳದಲ್ಲಿ ವೈದ್ಯರು ಮತ್ತು ಸಿಬ್ಬಂದಿ ವಸತಿಗೃಹಗಳು ನಿರ್ಮಾಣಗೊಂಡರೆ ಅಲ್ಲೆ ನೆಲೆ ನಿಂತು ವೈದ್ಯಕೀಯ ಸೇವೆ ಒದಗಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ತಕ್ಷಣ ಪ್ರತಿಕ್ರಿಯಿಸಿದ ಸಚಿವ ಎ. ಮಂಜು, ವಸತಿಗೃಹ ಇದ್ದೆಡೆ ಎಷ್ಟು ವೈದ್ಯರು ಅಲ್ಲೇ ನೆಲೆಸಿದ್ದಾರೆ ಹೇಳಿ? ಕರ್ತವ್ಯ ಒಂದು ಕಡೆ, ವಾಸ ಮತ್ತೊಂದು ಕಡೆ. ನಮಗೆ ಇದೆಲ್ಲ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಲ್ಲದೆ ಎಷ್ಟು ವೈದ್ಯರು ವಸತಿಗೃಹದಲ್ಲಿ ನೆಲೆಸಿದ್ದಾರೆ ಮಾಹಿತಿ ಕೊಡಿ ಎಂದು ಕೇಳಿದರು.
ರಸ್ತೆ ಅಭಿವೃದ್ಧಿಗೆ ಮನವಿ: ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಶ್ರವಣಬೆಳಗೊಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಿತೇಂದ್ರಕುಮಾರ್ ಮಾತನಾಡಿ, ಮಸ್ತಕಾಭಿಷೇಕ ಯಶಸ್ಸಿಗೆ ಸಹಕಾರ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಯವಕಾಶದ ಕೊರತೆ ಇರುವುದರಿಂದ ತುರ್ತಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು. ಪೊಲೀಸ್ ಭದ್ರತೆ ಹಾಗೂ ಅವರಿಗೆ ಅಗತ್ಯ ಸೌಲಭ್ಯ ಸಂಬಂಧ ಎಸ್ಪಿ ರಾಹುಲ್ಕುಮಾರ್ ಗಮನ ಸೆಳೆದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಚಿವ ಎ.ಮಂಜು ಉತ್ತರಿಸಿ ವಾಕಿ, ಟಾಕಿಯಿಂದ ಹಿಡಿದು ಎಲ್ಲ ಅಗತ್ಯ ಸೌಲಭ್ಯವನ್ನು ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಪಾಸ್: ಶ್ರವಣಬೆಳಗೊಳದಲ್ಲಿ ನೆಲೆಸಿರುವ ಸಾರ್ವಜನಿಕರು ದಿನನಿತ್ಯ ಓಡಾಡಲು ಹಾಗೂ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆಗಾಗಿ ವಿಶೇಷ ಪಾಸ್ ವಿತರಿಸುವ ಕುರಿತು ಚರ್ಚೆ ನಡೆಸಲಾಯಿತು. ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಗೋಪಾಲಕೃಷ್ಣ, ಜಿಪಂ ಸಿಇಒ ವೆಂಕಟೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಜಾನಕಿ, ಎಸಿ ಡಾ.ನಾಗರಾಜು ಮತ್ತಿತರ ಅಧಿಕಾರಿಗಳು ಹಾಜರಿದ್ದರು.
8 ಸಾವಿರ ಜನಕ್ಕೆ ಅವಕಾಶ: ಬಾಹುಬಲಿ ಸನ್ನಿಧಿಯಲ್ಲಿ ಮಸ್ತಕಾಭಿಷೇಕ ವಿಧಿ, ವಿಧಾನದಲ್ಲಿ ಪಾಲ್ಗೊಳ್ಳಲು ಹಾಗೂ ವೀಕ್ಷಿಸಲು, ಮಾಧ್ಯಮದವರು, ಪೊಲೀಸರು ಎಲ್ಲರೂ ಸೇರಿದಂತೆ ಎಂಟು ಸಾವಿರ ಜನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಮಿತಿ ಕಾರ್ಯಾಧ್ಯಕ್ಷ ಜಿತೇಂದ್ರಕುಮಾರ್ ಮನವಿ ಮಾಡಿದರು. 2006ರಲ್ಲಿ ನಡೆದ ಮಸ್ತಕಾಭಿಷೇಕದಲ್ಲಿ ಆರು ಸಾವಿರ ಜನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಎಂಟು ಸಾವಿರ ಆಗಬಹುದು ಎಂದರು. ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿಗಳು ಹೇಳಿದರು. – ಕೃಪೆ: ವಿಜಯಕರ್ನಾಟಕ