ಶ್ರವಣಬೆಳಗೊಳ, ಜೂನ್ 17, 2017: ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಎಷ್ಟು ಮಹತ್ವವೋ, ಜನ ಕಲ್ಯಾಣ ಕಾರ್ಯಕ್ರಮಗಳೂ ಅಷ್ಟೇ ಮಹತ್ವದ್ದಾಗಿದೆ ಎಂದು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಮಹಾಮಸ್ತಕಾಭಿಷೇಕ ಮಹೋತ್ಸವ-2018 ರ ನಿಮಿತ್ತ ಶ್ರವಣಬೆಳಗೊಳದ ಶ್ರೀ ಧವಲತೀರ್ಥಂನಲ್ಲಿರುವ ಬಾಹುಬಲಿ ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಹಾಗೂ ಔಷಧ ವಿತರಣಾ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಸುಖದಿಂದಿರಲು ಹಣದಿಂದ ಸಾಧ್ಯವಿಲ್ಲ. ಉತ್ತಮ ಜೀವನಕ್ಕೆ ಆರೋಗ್ಯ ಅತ್ಯಗತ್ಯವಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯದ ಬಗ್ಗೆ ಉದಾಸೀನ ಭಾವನೆಯಿಂದ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆಯಾಗಿರುತ್ತದೆ. ಇಂತಹ ಶಿಬಿರಗಳ ಆಯೋಜನೆಯಿಂದ ಆರೋಗ್ಯ ಜಾಗೃತಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತಹ ಹಲವಾರು ಜನಕಲ್ಯಾಣ ಯೋಜನೆಗಳನ್ನು ಆಯೋಜಿಸಲಾಗುತ್ತಿದ್ದು, ಈಗಾಗಲೇ ಕೃತಕ ದಂತ ಜೋಡಣಾ ಶಿಬಿರ, ಕೃತಕ ಕಾಲು ಜೋಡಣಾ ಶಿಬಿರ, ಪ್ರತಿನಿತ್ಯ ಆಸ್ಪತ್ರೆಗೆ ಬರುವ ಮಕ್ಕಳಿಗೆ ಹಾಲು ವಿತಣೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ನೇತ್ರ ಚಿಕಿತ್ಸಾ ಶಿಬಿರ, ಸೀಳು ತುಟಿ ಶಸ್ತ್ರ ಚಿಕಿತ್ಸೆ, ಮಧುಮೇಹ ಶಿಬಿರ, ಅಂಗವಿಕಲರಿಗೆ ಮೂರು ಚಕ್ರದ ಸೈಕಲ್ ವಿತರಣೆ ಮುಂತಾದ ಹಲವಾರು ಯೋಜನೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. 1981 ರ ಸಹಸ್ರಾಬ್ದಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ 1000 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಿ ಯಶಸ್ವಿಯಾಗಿದ್ದನ್ನು ಸ್ಮರಿಸಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಹಾಮಸ್ತಕಾಭಿಷೇಕದ ಪ್ರಥಮ ಹಂತದಲ್ಲಿ ಜನಕಲ್ಯಾಣ ಯೋಜನೆಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾದುದು. ಸ್ವಾಮೀಜಿಯವರ ಸಾಮಾಜಿಕ ಕಾಳಜಿ, ಬಡವರು ಹಾಗೂ ಆರ್ಥಿಕ ದುರ್ಬಲರನ್ನು ಗಮನದಲ್ಲಿಟ್ಟುಕೊಂಡು ಇಂತಹ ಯೋಜನೆಗಳನ್ನು ಆಯೋಜಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು. ಶ್ರೀಗಳ ಸದ್ಬಾವನೆ, ತತ್ವ-ಸಿದ್ದಾಂತಗಳನ್ನು ಮೈಗೂಡಿಸಿಕೊಂಡರೆ ಜೀವನ ಪಾವನಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯನಿಗೆ ಪ್ರತಿಯೊಂದು ಅಂಗಾಂಗಗಳು ಅತ್ಯವಶ್ಯಕ. ಆದರೆ ಕೆಲವರು ದೈಹಿಕ ನ್ಯೂನತೆಗಳಿಂದ ಬಳಲುತ್ತಿರುತ್ತಾರೆ. ಇಂತಹವರಿಗೂ ಉತ್ತಮ ಆರೋಗ್ಯ ಲಭಿಸುವಂತಾಗಬೇಕು ಎಂದು ಶ್ರೀಯವರು ಜನಕಲ್ಯಾಣ ಯೋಜನೆಯ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಆರ್ಥಿಕವಾಗಿ ದುರ್ಬಲವಾದವರಿಗೆ ವರವಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಬೇಕು. ಇದೇ ತಿಂಗಳ 23 ರಂದು ತಾಲ್ಲೂಕಿನ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಡೆಂಗ್ಯೂ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಈಗಾಗಲೇ 40 ಕೋಟಿ ಹಣ ಬಿಡುಗಡೆಯಾಗಿದ್ದು, ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿವಹಿಸಿ ಮಹೋತ್ಸವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಆದರೆ ರಸ್ತೆ ಕಾಮಗಾರಿ ವಿಳಂಬವಾಗಿದ್ದು, ಆದಷ್ಟು ಶೀರ್ಘದಲ್ಲಿ ಯೋಜನೆಯ ಪ್ರಕ್ರಿಯೆಗಳಿಗೆ ಚಾಲನೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಮಮತಾ ರಮೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಮಹಾಲಕ್ಷ್ಮಿ ಶಿವರಾಜ್, ರಂಜಿತ ನಿಂಗೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಹೇಮಾ ಪ್ರಭಾಕರ್, ಲತಾ ರಾಜಶೇಖರ್, ಮಹಾಮಸ್ತಕಾಭಿಷೇಕ ಮಹೋತ್ಸವದ ವಸ್ತು ಪ್ರದರ್ಶನ ಉಪ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ಜೈನ್, ಶ್ರುತಕೇವಲಿ ಎಜುಕೇಶನ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಜಿ.ಡಿ.ಪಾಶರ್ವ್ನಾಥ್, ಜನಕಲ್ಯಾಣ ಉಪ ಸಮಿತಿಯ ಸಹ ಸಂಯೋಜಕ ಸಚಿನ್ ಎಸ್.ಎ.ಜೈನ್ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ 175 ಮಂದಿ ಶಿಭಿರಾರ್ಥಿಗಳು ಭಾಗವಹಿಸಿ ಚಿಕಿತ್ಸೆ ಹಾಗೂ ಔಷಧಿ ಪಡೆದರು. ಶ್ರವಣ ದೋಷವಿದ್ದ ನೂರಕ್ಕೂ ಹೆಚ್ಚು ಜನರಿಗೆ ಕೃತಕ ಶ್ರವಣ ವರ್ಧಕವನ್ನು ಅಳವಡಿಸಲಾಯಿತು. ಶಿಬಿರದ ನೇತೃತ್ವವನ್ನು ಬೆಂಗಳೂರನ ಡಾ.ಹೆಚ್.ವಿ. ಶ್ರೀಮಂಧರ ಕುಮಾರ್, ಡಾ.ತಿಪ್ಪೆಸ್ವಾಮಿ, ಡಾ.ಶ್ರೀರಂಗ ಢಾಂಗೆ, ಡಾ.ಬಿ.ಡಿ.ಕೃಷ್ಣಪ್ಪ ವಹಿಸಿದ್ದರು. – ಜೈನ್ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವೀಸ್