ಈ ಎಲ್ಲ ಪ್ರಕ್ರಿಯೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕು. ಸಮೀಕ್ಷೆ ಮಾಡಿದ ಬಳಿಕ ಮನೆಗಳ ಬಾಡಿಗೆ ನಿಗದಿಪಡಿಸಲಾಗುವುದು.

ಶ್ರವಣಬೆಳಗೊಳ,ಜೂನ್ ೧೭, ೨೦೧೭: ಶ್ರವಣಬೆಳಗೊಳದಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಬರುವ ಪ್ರವಾಸಿಗರಿಗೆ ಹಳ್ಳಿ ಮನೆಗಳಲ್ಲಿ ಉಳಿದುಕೊಳ್ಳಲು ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಹೋತ್ಸವ ಸಮಿತಿಯ ವಿಶೇಷ ಅಧಿಕಾರಿ ಬಿ.ಎನ್‌.ವರಪ್ರಸಾದರೆಡ್ಡಿ ಹೇಳಿದರು.

ಶುಕ್ರವಾರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಶ್ರವಣಬೆಳಗೊಳ, ಬೆಕ್ಕ, ಧಮ್ಮನಿಂಗಲ, ಸುಂಡಹಳ್ಳಿ, ಕಬ್ಬಾಳು, ಕಾಂತರಾಜಪುರ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

6 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಲ್ಲಿನ 10–15 ಮನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರವಾಸಿಗರನ್ನು ಅತಿಥಿಗಳಂತೆ ಸತ್ಕರಿಸಬೇಕು. ಯಾತ್ರಾರ್ಥಿಗಳಿಗೆ ವಸತಿ ಸವಲತ್ತು ಕಲ್ಪಿಸುವ ಮನೆಯವರಿಗೆ ಸರ್ಕಾರದಿಂದ ಬಾಡಿಗೆ ನಿಗದಿಪಡಿಸಲಾಗುವುದು ಎಂದರು.

ಈ ಭಾಗದ ಜನತೆ ಅತಿಥಿಗಳ ಸತ್ಕಾರಕ್ಕೆ ಹೆಸರುವಾಸಿ. ಇದರಲ್ಲಿ ವ್ಯವಹಾರದ ದೃಷ್ಟಿಕೋನಕ್ಕಿಂತ ಮಾನವೀಯ ಸಂಬಂಧ ಮುಖ್ಯ. ಜನರ ಸಹಭಾಗಿತ್ವದಲ್ಲಿ ಮಹೋತ್ಸವವನ್ನು ಯಶಸ್ವಿಗೊಳಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ವಿ. ಚೈತ್ರಾ ಮಾತನಾಡಿ, ‘ಈ ಎಲ್ಲ ಪ್ರಕ್ರಿಯೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕು. ಸಮೀಕ್ಷೆ ಮಾಡಿದ ಬಳಿಕ ಮನೆಗಳ ಬಾಡಿಗೆ ನಿಗದಿಪಡಿಸಲಾಗುವುದು. ಬಾಡಿಗೆ ಹಣವನ್ನು ಆನ್‌ಲೈನ್‌ ಮೂಲಕ ಮನೆಯ ಮಾಲೀಕರ ಖಾತೆಗೆ ಜಮಾ ಮಾಡಲಾಗುವುದು.

ಪ್ರವಾಸಿಗರಿಗೆ ಭಾಷೆಯ ತೊಡಕಾಗದಂತೆ ಪ್ರವಾಸಿ ಮಾರ್ಗದರ್ಶಿಗಳನ್ನು ನೇಮಿಸಲಾಗುವುದು’ ಎಂದರು. ಉತ್ತರ ಕರ್ನಾಟಕದ ಆನೆಗೊಂದಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಳ್ಳಲಾಗಿದೆ. ಅದೇ ರೀತಿ ಶ್ರವಣಬೆಳಗೊಳದ ಸುತ್ತ  ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲ, ಸೃಜನಶೀಲತೆ ಬಳಸಿಕೊಳ್ಳಬೇಕು. ಈ ಭಾಗದ  ಸಂಸ್ಕೃತಿ, ವೈಶಿಷ್ಟ್ಯವನ್ನು ಪ್ರವಾಸಿಗರಿಗೆ ಪರಿಚಯಿಸಬೇಕು’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಮಾತನಾಡಿ, ‘6 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸಕ್ತರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಥವಾ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಇದರಿಂದ ಸ್ಥಳೀಯ ಜನರ ಆರ್ಥಿಕ ಸುಧಾರಣೆ, ಸ್ವಯಂ ಉದ್ಯೋಗ ಲಭ್ಯವಾಗುತ್ತದೆ’ ಎಂದರು.

ಇದರ ಜತೆಗೆ  ಪ್ರವಾಸಿಗರು ತಂಗಲು ಅನುಕೂಲವಾಗುವಂತೆ  ಈ ಭಾಗದಲ್ಲಿರುವ ಸಮುದಾಯ ಭವನಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜನಿಯರ್‌ ಸುರೇಶ್‌, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದ್ದರು. – ಕೃಪೆ: ಪ್ರಜಾವಾಣಿ