ಶ್ರವಣಬೆಳಗೊಳ, ಜೂನ್ ೧೭, ೨೦೧೭: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಶ್ರವಣಬೆಳಗೊಳ ಗ್ರಾಮಾಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ  ಸ್ವಾಮೀಜಿ ಹೇಳಿದರು.

ಪಟ್ಟಣದ ಕಾನಜಿ ಯಾತ್ರಿಕಾಶ್ರಮದ ಮುಂಭಾಗದಲ್ಲಿ ಏರ್ಪಡಿಸಿದ್ದ ಸ್ವಚ್ಛತೆಗೆ ಕ್ಷೇತ್ರದ ವತಿಯಿಂದ ಉಚಿತ ವಾಹನಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಕಾಯರ್ಕ್ರಮದಲ್ಲಿ ಮಾತನಾಡಿದ ಅವರು, 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 3 ತ್ರಿಚಕ್ರ ಆಪೆೇ ಆಟೋಗಳನ್ನು ಖರೀದಿಸಿದ್ದು, ಅವುಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯ ಪಟ್ಟಣದ ಸುತ್ತಾ 5 ಕಿ.ಮೀ. ವ್ಯಾಪ್ತಿಯಲ್ಲಿ ತ್ಯಾಜ್ಯ ವಸ್ತು ಸಂಗ್ರಹಿಸಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು. ಈ ವಾಹನಗಳ ನಿರ್ವಹಣೆ, ನೌಕರರ ವೇತನ, ವಾಹನಕ್ಕೆ ಇಂಧನವನ್ನು  ಸ್ಥಳೀಯ ಎಸ್.ಡಿ.ಜೆ.ಎಂ.ಐ.ಎಂ.ಸಿ.ಟ್ರಸ್ಟ್‌ ಭರಿಸಲಿದೆ ಎಂದು ತಿಳಿಸಿದರು. ಪಟ್ಟಣವನ್ನು ಸ್ಚಚ್ಛ, ಹಸಿರು, ಸುಂದರಗೊಳಿಸಬೇಕು ಎಂದು ಗ್ರಾಮ ಪಂಚಾಯ್ತಿತಿಗೆ ಸಲಹೆ ನೀಡಿದರು.

ಈ ವಾಹನಗಳಿಗೆ ಸಚಿವ ಎ.ಮಂಜು ಮತ್ತು ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದ ಸಂದರ್ಭದಲ್ಲಿ ಎ.ಮಂಜು ಮಾತನಾಡಿ ರಾಜ್ಯ ಸರ್ಕಾರವು ಸಹಕಾರ ಸಂಘಗಳ ಮೂಲಕ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಸೌಲಭ್ಯವನ್ನು ರೈತರಿಗೆ ನೀಡುತ್ತಿದೆ. ರೈತರ ಸಾಲವನ್ನು ಕೇಂದ್ರ ಸರ್ಕಾರ 50 % ಮನ್ನಾ ಮಾಡಲು ಒಪ್ಪಿದರೆ ಉಳಿಕೆ 50 % ಸಾಲವನ್ನು  ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲ ಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಹೇಮಾಪ್ರಭಾಕರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಮತಾರಮೇಶ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ಮಹಾಮಕ್ಷ್ಮಿ ಶಿವರಾಜ್, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಎನ್.ಆರ್.ವಾಸು, ರವಿ ನಂಜಪ್ಪ, ಲೋಕೇಶ್ ಇತರ ಗಣ್ಯರು ಉಪಸ್ಥಿತರಿದ್ದರು.