ಇಲ್ಲಿನ ವಿಂಧ್ಯಗಿರಿ ಬೆಟ್ಟದಲ್ಲಿರುವ ವಿಶ್ವವಿಖ್ಯಾತ ಬಾಹುಬಲಿ ಮೂರ್ತಿಯ 1037ನೇ ಪ್ರತಿಷ್ಠಾಪನಾ ಮಹೋತ್ಸವ ಶನಿವಾರ ವೈಭವದಿಂದ ನೆರವೇರಿತು…

Bahubali Swamy Installation Day Pooja
Bahubali Swamy Installation Day Pooja

ಶ್ರವಣಬೆಳಗೊಳ (ಹಾಸನ ಜಿಲ್ಲೆ), ಏಪ್ರಿಲ್ ೧, ೨೦೧೭: ಇಲ್ಲಿನ ವಿಂಧ್ಯಗಿರಿ ಬೆಟ್ಟದಲ್ಲಿರುವ ವಿಶ್ವವಿಖ್ಯಾತ ಬಾಹುಬಲಿ ಮೂರ್ತಿಯ 1037ನೇ ಪ್ರತಿಷ್ಠಾಪನಾ ಮಹೋತ್ಸವ ಶನಿವಾರ ವೈಭವದಿಂದ ನೆರವೇರಿತು. ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಮಹಾವೈರಾಗಿಗೆ ವಿವಿಧ ಪೂಜೆ ಸಲ್ಲಿಸಲಾಯಿತು.

ಕ್ರಿ.ಶ. 981ರ ಮಾರ್ಚ್‌ 13ರಂದು ವಿಂಧ್ಯಗಿರಿಯ ಪರ್ವತದ ಮೇಲೆ ಬಾಹುಬಲಿಯ 58.8 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೇರವೇರಿಸುವಂತೆ ವಿಗ್ರಹ ನಿರ್ಮಾಣ ಮಾಡಿಸಿದ ಚಾವುಂಡರಾಯ ಅಭಿಪ್ರಾಯಪಟ್ಟಿದ್ದ. ಅದರಂತೆ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ. ಅಲ್ಲದೆ, ಶಾಂತಿ ಸ್ಥಾಪನೆಯ ಉದ್ದೇಶದಿಂದ ಈ ಪ್ರತಿಷ್ಠಾಪನಾ ದಿನವನ್ನು ವರ್ಷಕ್ಕೊಮ್ಮೆ ಆಚರಿಸುವುದು ವಾಡಿಕೆ.

ಸುಮಂಗಲಿಯರು 1008 ಅರ್ಘ್ಯಗಳನ್ನು ಸ್ವಾಮಿಗೆ ಅರ್ಪಿಸಿದರು. ಪ್ರತಿಷ್ಠಾಚಾರ್ಯರಾದ ಎಸ್‌.ಡಿ.ನಂದಕುಮಾರ್‌, ಎಸ್‌.ಪಿ.ಉದಯಕುಮಾರ್‌ ಮತ್ತು ತಂಡದವರು ಪೂಜೆಯ ನೇತೃತ್ವ ವಹಿಸಿದ್ದರು.ಆಚಾರ್ಯ ಚಂದ್ರಪ್ರಭ ಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಗಿರಿನಾರ್‌ಸಾಗರ ಮಹಾರಾಜ, ಪಾವನಕೀರ್ತಿ ಮಹಾರಾಜರು, ಆರ್ಯಿಕಾ ಕುಂದಶ್ರೀ ಮಾತಾಜಿ, ಸುಪ್ರಭಾಮತಿ ಮಾತಾಜಿ, ಶಿವಮತಿ ಮಾತಾಜಿ, ಸಿದ್ಧಾಂತಕೀರ್ತಿ ಸ್ವಾಮೀಜಿ ಹಾಜರಿದ್ದರು. – ಸುದ್ದಿ ಕೃಪೆ: ಪ್ರಜಾವಾಣಿ, ಚಿತ್ರಗಳು – ದೀಪ್ತಿ ಜೈನ್, ಶ್ರವಣಬೆಳಗೊಳ