ಶ್ರವಣಬೆಳಗೊಳ, ಏಪ್ರಿಲ್ ೧೩, ೨೦೧೭: ಶ್ರವಣಬೆಳಗೊಳ ಪಟ್ಟಣದ ಇತಿಹಾಸ ಪ್ರಸಿದ್ಧ ಚಿಕ್ಕ ದೇವರಾಜ ಒಡೆಯರ ಕಲ್ಯಾಣಿಯಲ್ಲಿ 22ನೇ ತೀರ್ಥಂಕರರಾದ ಭಗವಾನ್‌ ನೇಮಿನಾಥ ತೀರ್ಥಂಕರರ ತೆಪ್ಪೋತ್ಸವ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಬುಧವಾರ ರಾತ್ರಿ ವೈಭವದಿಂದ ನೆರವೇರಿತು.

ಭಂಡಾರ ಬಸದಿಯಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಭಗವಾನ್‌ ನೇಮಿನಾಥ ತೀರ್ಥಂಕರರ ಉತ್ಸವವು ಶ್ರೀ ಜೈನ ಮಠದ ಮುಂಭಾಗದಿಂದ ಚಿಕ್ಕದೇವರಾಜ ಒಡೆಯರ ಕಲ್ಯಾಣಿಯವರೆಗೆ ಮಂಗಳ ವಾದ್ಯದೊಂದಿಗೆ, ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಬಿದಿರುಗಳಿಂದ ಸಿದ್ಧಗೊಂಡ ತೆಪ್ಪವನ್ನು ಹಸಿರು ತೋರಣ, ಬಾಳೆದಿಂಡು, ಹೂ, ಕಬ್ಬಿನ ಜಲ್ಲೆ ಮತ್ತು ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಅದರಲ್ಲಿ ಭಗವಾನ್‌ ನೇಮಿನಾಥ ತೀರ್ಥಂಕರರನ್ನು ಮತ್ತು ಗೋಮೇಧ ಯಕ್ಷ ಹಾಗೂ ಕೂಷ್ಮಾಂಡಿನಿ ಯಕ್ಷಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿ ಮಹಾಮಂಗಳಾರತಿಯನ್ನು ನೆರವೇರಿಸಿದ ನಂತರ ತೆಪ್ಪವನ್ನು ಕಲ್ಯಾಣಿಯ ಸುತ್ತ ಮಂಗಳವಾದ್ಯಗಳೊಂದಿಗೆ ಸಾಗುತ್ತ್ತ ಬರುತ್ತಿದ್ದಾಗ ತೆಪೊ್ಪೕತ್ಸವದ ಮುಂದೆ-ಹಿಂದೆ, ಅಕ್ಕ-ಪಕ್ಕದಲ್ಲಿ ನೂರಾರು ಯುವಕರು ಈಜುತ್ತ ಭಗವಾನ್‌ ನೇಮಿನಾಥ ಭಗವಾನ್‌ ಕೀ ಜೈ, ಅಹಿಂಸಾ ಪರಮೋ ಧರ್ಮ, ವಿಶ್ವ ಧರ್ಮ ಕೀ ಜೈ ಎಂದು ಜೈಕಾರ ಹಾಕಿದರು.

ಕಲ್ಯಾಣಿಯ ಸುತ್ತ ನೆರೆದಿದ್ದ ಸಾವಿರಾರು ಜನರು ತೆಪ್ಪೋತ್ಸವವನ್ನು ಕಣ್ತುಂಬಿಸಿಕೊಂಡರು. ಕಲ್ಯಾಣಿಗೆ ಎರಡೂ ಕಡೆಯ ದೊಡ್ಡ ಗೋಪುರ ಮತ್ತೆರಡು ಕಡೆಯ ಚಿಕ್ಕಗೋಪುರಗಳಿಗೆ ಸುಂದರವಾದ ವಿದ್ಯುತ್‌ ದೀಪಾಲಂಕಾರವನ್ನು ಮಾಡಲಾಗಿತ್ತು. ಭಗವಾನ್‌ ನೇಮಿನಾಥ ತೀರ್ಥಂಕರರ ತೆಪೊ್ಪೕತ್ಸವದ ಸೇವಾಕರ್ತರುಗಳಾದ ಪಟ್ಟಣದ ಕೆ.ಪಿ.ಧರಣಪ್ಪ ಪದ್ಮಾವತಮ್ಮ ಹಾಜರಿದ್ದರು. ಸೇವಾ ಟ್ರಸ್ಟ್‌ನ ಪೂರ್ಣಿಮಾ ಮತ್ತು ಅನಂತಪದ್ಮನಾಭ್‌ ತೆಪೊ್ಪೕತ್ಸವದ ನಂತರ ನೆರೆದಿದ್ದ ಸಾವಿರಾರು ಜನರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. – ಕೃಪೆ: ವಿಜಯಕರ್ನಾಟಕ